ಪಾವ್ಲಾವ್, ಐವಾನ್ ಪೆಟ್ರೋವಿಚ್ 

1849-1936. ರಷ್ಯ ದೇಶದ ಪ್ರಸಿದ್ಧ ದೇಹಕ್ರಿಯಾವಿಜ್ಞಾನಿ. ವಿವಾದಾತೀತ ಪ್ರಾಯೋಗಿಕ ವ್ಯಾಸಂಗಗಳಿಂದ ಜಠರದ ಮತ್ತು ನರಮಂಡಲದ ಕ್ರಿಯೆಗಳ ಬಗ್ಗೆ ಕೆಲವು ಅಂಶಗಳನ್ನು ಖಚಿತವಾಗಿ ವಿಶದೀಕರಿಸಿದ್ದಕ್ಕಾಗಿ ಮತ್ತು ನೂತನ ವ್ಯಾಸಂಗ ವಿಧಾನವನ್ನು ಪ್ರಾರಂಭಿಸಿದ್ದಕ್ಕಾಗಿ 1904ರಲ್ಲಿ ಇವನಿಗೆ ನೊಬೆಲ್ ಪಾರಿತೋಷಿಕ ಲಭಿಸಿತು.

ಐವಾನ್ ಪೆಟ್ರೋವಿಚ್ ಪಾವ್ಲಾವ್ ಮಧ್ಯರಷ್ಯದ ರಿಯಾಸಾನ್ ಎಂಬ ಸ್ಥಳದಲ್ಲಿ ಮನೆಯ ಹಿರಿಮಗನಾಗಿ 1849 ಸೆಪ್ಟೆಂಬರ್ 27ರಂದು ಜನಿಸಿದ. ಇವನ ತಂದೆ ಪ್ಯೋಟೋರ್ ಡಿಮಿಟ್ರಿವಿಜ್ ಮತ್ತು ತಾಯಿ ವಾರ್‍ವಾರ ಐವನೋವ. ಪ್ಯೋಟೋರ್ ಸ್ಥಳೀಯ ಮಠಾಧಿಕಾರಿ. ಮಗನ ಹನ್ನೊಂದನೆಯ ವಯಸ್ಸಿನಲ್ಲಿ ಸ್ಥಳದಲ್ಲೇ ಇದ್ದ ಮತೀಯ ಶಾಲೆಯಲ್ಲಿ ಅವನನ್ನು ವ್ಯಾಸಂಗಕ್ಕಾಗಿ ಸೇರಿಸಿದ. ಹುಡುಗನಿಗೆ ಪುಸ್ತಕಗಳ ಮೇಲೆ ಬಲು ಪ್ರೇಮ. ಜಿ. ಎಚ್. ಲೆವಿಸ್ ಬರೆದಿದ್ದ ಪ್ರಾಯೋಗಿಕ ದೇಹಕ್ರಿಯವಿಜ್ಞಾನ (ಪ್ರಾಕ್ಟಿಕಲ್ ಫಿಸಿಯಾಲಜಿ) ಎಂಬ ಗ್ರಂಥವನ್ನೂ ಐ.ಎಮ್. ಸೆಚೆನೊವ್ ಬರೆದಿದ್ದ ಮಿದುಳಿನ ಪ್ರತಿವರ್ತನೆಗಳು (ರಿಫ್ಲೆಕ್ಸಸ್ ಆಫ್ ದಿ ಬ್ರೆಯ್ನ್) ಎಂಬ ಗ್ರಂಥವನ್ನೂ ಶಾಲಾ ಪುಸ್ತಕ ಭಂಡಾರದಿಂದ ಪಡೆದು ಓದಿ ಅವುಗಳಿಂದ ತೀವ್ರ ಪ್ರಭಾವಿತನಾದ. ಮುಂದೆ ಈ ಎರಡು ಪುಸ್ತಕಗಳನ್ನೂ ಸದಾ ಕಣ್ಣ ಮುಂದೆ ಸ್ವಂತ ಗ್ರಂಥ ಭಂಡಾರದಲ್ಲಿ ಇಟ್ಟುಕೊಂಡಿದ್ದುಂಟು. ತಾನೂ ವೈದ್ಯಕೀಯ ವ್ಯಾಸಂಗ ಮಾಡಿ ಸೆಚೆನೋವನ ಪುಸ್ತಕದಲ್ಲಿ ವಿವರಿಸಿದ್ದ ವಿಚಾರಗಳಂಥ ನಿಷ್ಕøಷ್ಟ ಪ್ರಯೋಗಗಳನ್ನು ಮಾಡಬೇಕೆಂದು ನಿರ್ಧರಿಸಿದ. ಸೇಂಟ್ ಪೀಟರ್ಸ್‍ಬರ್ಗಿನ (ಈಗಿನ ಲೆನಿನ್‍ಗ್ರಾಡ್) ವಿಶ್ವವಿದ್ಯಾಲಯವನ್ನು 1870ರಲ್ಲಿ ಗಣಿತ ಮತ್ತು ಭೌತವಿಜ್ಞಾನಗಳ ಅಧ್ಯಯನಕ್ಕಾಗಿ ಸೇರಿದ. ಅಲ್ಲಿ ದೇಹಕ್ರಿಯಾವಿಜ್ಞಾನದ ಪ್ರಾಧ್ಯಾಪಕ ಇಲ್ಯ ಸಿಯಾನನ ಪ್ರಯೋಗ ಹಾಗೂ ಪ್ರವಚನಗಳಿಂದ ಪ್ರಭಾವಿತನಾದ. ವೈದ್ಯಕೀಯ ಪೂರ್ವವ್ಯಾಸಂಗಗಳನ್ನು ಮಾಡುತ್ತಿದ್ದಾಗಲೆ ಪಾವ್ಲಾವ್, ಸಿಯಾನನ ಸಲಹೆಯಂತೆ, ಮೇದೋಜೀರಕಾಂಗವನ್ನು ಪೂರೈಸುವ ನರಗಳ ವಿಷಯವಾಗಿ ಪ್ರಾಣಿಗಳಲ್ಲಿ ಸಂಶೋಧನೆಗಳನ್ನು ಕೈಗೊಂಡ. ದೀರ್ಘ ಕಾಲಾವಧಿ ಬೇಡುತ್ತಿದ್ದ ಈ ಸಂಶೋಧನೆಯನ್ನು ತೃಪ್ತಿಕರವಾಗಿ ಮುಗಿಸಿದ್ದಕ್ಕಾಗಿ ವೈದ್ಯಪೂರ್ವವ್ಯಾಸಂಗ ಮುಗಿದಕೂಡಲೆ ಪಾವ್ಲಾವ್‍ನಿಗೆ ಚಿನ್ನದ ಪದಕ ಬಹುಮಾನವಾಗಿ ದೊರೆಯಿತು (1875).

ವೈದ್ಯವಿದ್ಯೆಯನ್ನು ಮುಂದುವರಿಸುವುದಕ್ಕಾಗಿ ಪಾವ್ಲಾವ್ 1875ರಲ್ಲಿ ಮಿಲಿಟರಿ ಮೆಡಿಕಲ್ ಆಕಾಡೆಮಿಯಲ್ಲಿ ಮೂರನೆಯ ವರ್ಷದ ವಿದ್ಯಾರ್ಥಿಯಾಗಿ ಸೇರಿದ. ಅದೇ ತರುಣದಲ್ಲಿ ಈತ ರಕ್ತಪರಿಚಲನೆಯ ನರನಿಯಂತ್ರಣದ ವಿಷಯವಾಗಿಯೂ ಆಹಾರ ಜೀರ್ಣವಾಗುವ ವಿಷಯವಾಗಿಯೂ ಸಂಶೋಧನೆಗಳನ್ನು ಕೈಗೊಂಡ. ಪ್ರಾಣಿಗಳಲ್ಲಿ ಪ್ರಯೋಗಗಳಿಗೆ ಅಗತ್ಯವಾದ ಶಸ್ತ್ರಕ್ರಿಯೆಯನ್ನು ಮಾಡುವುದರಲ್ಲಿ ಆಶ್ಚರ್ಯಕರ ಕೈಚಳಕ ಪಡೆದ. ಉದಾಹರಣೆಗೆ ಈತ ನಾಯಿಯ ತೊಡೆ ಅಪಧಮನಿ ಮೂಲಕ ರಬ್ಬರ್ ನಳಿಕೆಯನ್ನು ಆ ನಾಯಿಗೆ ನೋವೇ ಆಗದಂತೆ ತೂರಿಸುತ್ತಿದ್ದ; ಮತ್ತು ಶಸ್ತ್ರû್ರಕ್ರಿಯೆ ಮಾಡುವಾಗ ಎಡಗೈ ಬಲಗೈ ಎರಡನ್ನೂ ಏಕಪ್ರಕಾರವಾದ ಕುಶಲತೆಯಿಂದ ಬಳಸುತ್ತಿದ್ದ. ಶಸ್ತ್ರಕ್ರಿಯೆಗೆ ಮುನ್ನ ಪ್ರಯೋಗಿಸಿದ್ದ ಪ್ರಾಣಿಗಳ ಆರೈಕೆ, ಶಸ್ತ್ರಕ್ರಿಯೆಯ ಕಾಲದಲ್ಲಿ ಮಾನವರ ವಿಷಯದಲ್ಲಿ ಅನುಸರಿಸುವಂಥದ್ದೇ ಆದ ಅರಿವಳಿಕೆ ಮತ್ತು ಏಕಾಣುಗಳ ಸೋಂಕು ಉಂಟಾಗದಂತೆ ಮುನ್ನೆಚ್ಚರಿಕೆ, ಶಸ್ತ್ರಕ್ರಿಯೆ ಮುಗಿದನಂತರದ ಯುಕ್ತಚಿಕಿತ್ಸೆ ಮತ್ತು ಆರೈಕೆ ಅಲ್ಲದೆ ಪ್ರಯೋಗಾನಂತರವೂ ಪ್ರಾಣಿಗಳ ಕೈಬಿಡದೆ ಜೀವಮಾನಪರ್ಯಂತ ಅವನ್ನು ಪ್ರೀತಿಯಿಂದ ನೋಡಿಕೊಂಡಿರುವುದು ಇವೆಲ್ಲ ಪ್ರಾರಂಭದಿಂದ ತನ್ನ ಸಂಶೋಧನ ಜೀವನದ ಕೊನೆಯ ತನಕವೂ ಪಾವ್ಲಾವ್ ರೂಢಿಸಿಕೊಂಡಿದ್ದ ಅಭ್ಯಾಸಗಳು. ಪ್ರಾಣಿಗಳನ್ನು ಇಷ್ಟು ಅಚ್ಚುಕಟ್ಟಾಗಿ ನೋಡಿಕೊಂಡಿದ್ದು ದೀರ್ಘಕಾಲಿಕವಾಗಿ ಅವು ಅತ್ಯುತ್ತಮವಾಗಿ ಸಹಕರಿಸುವಂತೆಯೂ ಪ್ರಯೋಗಗಳು ಹೆಚ್ಚು ಕರಾರುವಾಕ್ಕಾಗಿ ಮತ್ತು ಅರ್ಥವತ್ತಾಗಿ ಇರುವಂತೆಯೂ ಅನುಕೂಲವಾದ ಏರ್ಪಾಡನ್ನು ರೂಢಿಸಿಕೊಂಡಿದ್ದ ಈ ವೈದ್ಯವಿದ್ಯಾರ್ಥಿಯನ್ನು ರಷ್ಯದ ಮಿಲಿಟರಿ ಮೆಡಿಕಲ್ ಅಕಾಡೆಮಿಯ ಸುಪ್ರಸಿದ್ಧ ಪ್ರಾಧ್ಯಾಪಕ ಬಾಟ್ಕಿನ್ ಮೆಚ್ಚಿದ. ಈತ ಹೊಸದಾಗಿ ಪ್ರಾರಂಭಿಸಿದ ಪ್ರಾಣಿ ಪ್ರಯೋಗಾಲಯಕ್ಕೆ ಇನ್ನೂ ವಿದ್ಯಾರ್ಥಿ ದೆಸೆಯಲ್ಲಿದ್ದ ಪಾವ್ಲಾವನನ್ನು ಮುಖ್ಯಸ್ಥನಾಗಿ ಮಾಡಿದ. ಇಲ್ಲಿ ಸಂಶೋಧನೆಗಳನ್ನು ಮಾಡುತ್ತ ಮತ್ತು ಮಾಡಿಸುತ್ತ ಜೊತೆಯಲ್ಲೆ ವೈದ್ಯವ್ಯಾಸಂಗವನ್ನೂ ಮುಂದುವರಿಸುತ್ತ ಪಾವ್ಲಾವ್ ಡಿಸೆಂಬರ್ 1879ರಲ್ಲಿ ಎಂ.ಡಿ. ಪದವಿ ಪಡೆದ. ಅದೇ ವೇಳೆ, 1877ರ ಬೇಸಗೆ ರಜದಲ್ಲಿ ಪಾವ್ಲಾವ್ ಬ್ರೆಸ್ಲೊವಿಗೆ ಹೋಗಿ, ಆ ಕಾಲದ ಅತ್ಯಂತ ಶ್ರೇಷ್ಠ ದೇಹಕ್ರಿಯಾವಿಜ್ಞಾನಿಗಳ ಪೈಕಿ ಒಬ್ಬನಾದ ಹೀಡನ್‍ಹೆಯ್ನ್ ಎಂಬಾತನ ಕೈಕೆಳಗೆ ಆತನ ಪ್ರಯೋಗಾಲಯದಲ್ಲಿ ಕೆಲಸಮಾಡಿ ಹೆಚ್ಚು ಅನುಭವ ಮತ್ತು ಜ್ಞಾನ ಪಡೆದ. 1878ರಲ್ಲಿ ತಾನು ಮಾಡಿದ ಕೆಲಸದ ವಿಷಯವಾಗಿ (ಮೊಲಗಳಲ್ಲಿ ಮೇದೋಜೀರಕಾಂಗದ ನಾಳವನ್ನು ಬಂಧಿಸುವುದರ ಪರಿಣಾಮಗಳು) ಪ್ರಬಂಧವನ್ನು ಬರೆದು ಪ್ರಕಟಿಸಿದ. ಸುಮಾರು ಅದೇ ವೇಳೆ ಶಸ್ತ್ರಕ್ರಿಯೆಯಿಂದ ನಾಯಿಗಳಲ್ಲಿ ಮೇದೋಜೀರಕಾಂಗದ ನಾಳವನ್ನು ದೇಹದ ಹೊರಗೆ ತೆರೆದುಕೊಳ್ಳುವಂಥ ಮತ್ತು ವಿವಿಧ ಪ್ರಯೋಗಗಳ ಕಾಲದಲ್ಲಿ ಆರೋಗ್ಯ ಸ್ಥಿತಿಯಲ್ಲಿರುವ ನಾಯಿಗಳಿಂದ ಮೇದೋಜೀರಕ ರಸವನ್ನು ಆ ರೀತಿ ಪಡೆಯುವಂಥ ತನ್ನದೇ ಆದ ವಿಶಿಷ್ಟ ವಿಧಾನವನ್ನೂ ಪ್ರಕಟಿಸಿದ.

ವೈದ್ಯಪದವಿ ದೊರೆತ ಬಳಿಕ ಪಾವ್ಲಾವನಿಗೆ ಯೂರೋಪಿನಲ್ಲಿ ಹೆಚ್ಚಿನ ತರಬೇತಿಗಾಗಿ ಸಂಚಾರ ಕೈಗೊಳ್ಳಲು ಎರಡುವರ್ಷಗಳ ವಿದ್ಯಾರ್ಥಿವೇತನ ದೊರೆಯಿತು. ಇದರ ಸದುಪಯೋಗ ಪಡೆಯಲು ಈತ ಆಗಿನ ಇನ್ನೊಬ್ಬ ವಿಖ್ಯಾತ ದೇಹಕ್ರಿಯಾವಿಜ್ಞಾನಿ ಕಾರ್ಲ್ ಲಡ್‍ವಿಗ್ ಎಂಬಾತನ ಕೈಕೆಳಗೆ ಅವನ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ (1884-86). ಹೀಡನ್‍ಹೆಯ್ನ್ ಮತ್ತು ಲಡ್‍ವಿಗ್ ಇಬ್ಬರೂ ದೇಹಕ್ರಿಯೆಯ ಬಗ್ಗೆ ಅನೇಕ ವಿಷಯಗಳಲ್ಲಿ ತಾತ್ತ್ವಿಕವಾಗಿ ಪರಸ್ಪರ ಭಿನ್ನಾಭಿಪ್ರಾಯ ಉಳ್ಳವರಾಗಿದ್ದು ತಮ್ಮ ತಮ್ಮ ದೃಷ್ಟಿಕೋನಗಳನ್ನು ರುಜುಪಡಿಸುವುದಕ್ಕಾಗಿ ಅನೇಕ ಚತುರ ಹಾಗೂ ಜಟಿಲ ಪ್ರಯೋಗಗಳನ್ನು ಕೈಗೊಂಡು ಬಹುಮುಖ ವ್ಯಾಸಂಗಗಳನ್ನು ಮುಂದುವರಿಸುತ್ತಿದ್ದರು. ಉನ್ನತ ಮಟ್ಟದ ಈ ವಿಜ್ಞಾನಿಗಳ ಪೈಪೋಟಿಯಿಂದಾಗಿ ದೇಹಕ್ರಿಯಾವಿಜ್ಞಾನದಲ್ಲಿ ಅನೇಕ ವಿಷಯಗಳು ವಿಶದೀಕರಿಸಲ್ಪಟ್ಟವು. ಇಂಥ ಪ್ರಖ್ಯಾತ ವ್ಯಕ್ತಿಗಳ ಕೈಕೆಳಗೆ ಕೆಲಸ ಮಾಡಿ ಅನುಭವ ಗಳಿಸಲು ಇಂಗ್ಲೆಂಡ್, ಯೂರೋಪ್, ಅಮೆರಿಕ ಎಲ್ಲ ಕಡೆಗಳಿಂದಲೂ ಶಿಷ್ಯರು ಬಂದು ಸೇರಿಕೊಳ್ಳುತ್ತಿದ್ದರು. ಈ ಶಿಷ್ಯರು ತಕ್ಕಷ್ಟು ತರಬೇತಿಹೊಂದಿದ ಮೇಲೆ ತಮ್ಮತಮ್ಮ ದೇಶಗಳಲ್ಲಿ ತಮ್ಮ ಗುರುಗಳ ಪಂಥದಲ್ಲೇ ಉನ್ನತದರ್ಜೆಯ ಪ್ರಾಯೋಗಿಕ ವ್ಯಾಸಂಗಗಳನ್ನು ಮುಂದುವರಿಸಲಾರಂಭಿಸಿದರು. ಮೊದಲೇ ಹೀಡನ್‍ಹೆಯ್ನನ ಕೈಕೆಳಗೆ ತರಬೇತಿಹೊಂದಿದ್ದ ಪಾವ್ಲಾವ್ ಲಡ್‍ವಿಗ್ಗನ ಕೈಕೆಳಗೂ ತರಬೇತಿ ಹೊಂದಿ, ವೈದ್ಯಶ್ಯಾತ್ಮಕವಾಗಿದ್ದ ಅವರಿಬ್ಬರ ವ್ಯಾಸಂಗ ಕ್ರಮಗಳಲ್ಲೂ ಸಿದ್ಧಾಂತಗಳಲ್ಲೂ ಪರಿಣಿತನಾದ. ರಷ್ಯಕ್ಕೆ ವಾಪಸಾಗುವ ಮುನ್ನ ಹೀಡನ್‍ಹೆಂiÀi್ನನ ಪ್ರಯೋಗಾಲಯದಲ್ಲಿ ಕೆಲವುಕಾಲ ಮತ್ತೊಮ್ಮೆ ಕೆಲಸ ಮಾಡಿದ. ವಾಪಸಾದ ಮೇಲೆ ಇನ್‍ಸ್ಟಿಟ್ಯೂಟ್ ಆಫ್ ಎಕ್ಸ್‍ಪೆರಿಮೆಂಟಲ್ ಮೆಡಿಸಿನ್ ಎಂಬ ಸಂಸ್ಥೆಯ ಮುಖ್ಯಸ್ಥನಾಗಿ ನೇಮಕಗೊಂಡು ಕೂಡಲೇ ಹೊಸ ಪ್ರಾಯೋಗಿಕ ಸಂಶೋಧನೆಗಳಲ್ಲಿ ಧುಮುಕಿದ, ಇದೇ ವೇಳೆ ಸಿರಾಫಿಮ ವಾಸಲಿಯೆವ್ನ ಕಾರ್ಚೆವ್‍ಸ್ಕಾಂiÀi ಎಂಬಾಕೆಯನ್ನು ಮದುವೆ ಆದ. ಪಾಂಡಿತ್ಯ ಲಕ್ಷಣವಿದ್ದ ಮತ್ತು ಡಾಸ್ಟೊಯೆವ್‍ಸ್ಕಿಯ ಗೆಳತಿಯಾಗಿದ್ದ ಈ ಸುಂದರ ತರುಣಿ ಬಲುಬಡತನದಲ್ಲಿದ್ದುದರಿಂದ ಮದುವೆ ಆದ ತರುಣದಲ್ಲಿ ಸಂಸಾರ ಹೂಡಲು ಹಣ ಸಾಲದೆ ದಂಪತಿಗಳು ಕೆಲಕಾಲ ಬೇರೆ ಬೇರೆಯೇ ಆಗಿರಬೇಕಾಗಿತ್ತು. ಈಕೆ ದೈವಭಕ್ತೆ. ಮನೆಗೆಲಸ ಮತ್ತು ಗಂಡನ ವ್ಯಾಸಂಗಗಳಲ್ಲಿ ಆಸಕ್ತೆ. ಆತನ ಸಕಲ ಸೌಖ್ಯವನ್ನು ಕಾಯ್ದುಕೊಳ್ಳುವುದರಲ್ಲಿ ನಿರತಳಾಗಿದ್ದಳು. ಮಹಾವಿಜ್ಞಾನಿಗಳ ಕೈಕೆಳಗೆ ಪಡೆದ ತರಬೇತಿ, ಸ್ವಂತ ಕೈಚಳಕ, ವೈಯಕ್ತಿಕವಾದ ಪ್ರಯೋಗ, ಪ್ರಾಣಿಗಳ ಬಳಕೆ ವಿಧಾನ ಮತ್ತು ಶೀಘ್ರವಾಗಿ ಪ್ರಕಟಿಸಿದ್ದ ಉನ್ನತ ದರ್ಜೆಯ ಸಂಶೋಧನ ಫಲಿತಾಂಶಗಳು ಇವುಗಳಿಂದ ಪಾವ್ಲಾವ್ ಪ್ರಸಿದ್ಧನಾದ. ಮಿಲಿಟರಿ ಮೆಡಿಕಲ್ ಅಕಾಡೆಮಿಯಲ್ಲಿ ಅವನನ್ನು ದೇಹಕ್ರಿಯಾವಿಜ್ಞಾನದ ಪ್ರಾಧ್ಯಾಪಕನಾಗಿ ನೇಮಿಸಲಾಯಿತು. ಈ ಸ್ಥಾನವನ್ನು ಅವನು ಮೂವತ್ತನಾಲ್ಕು ವರ್ಷ ಕಾಲ ಅಲಂಕರಿಸಿದ್ದ. ಪ್ರಪಂಚದ ನಾನಾ ಕಡೆಗಳಿಂದ ಈ ಸಂಸ್ಥೆಯಲ್ಲಿ ತರಬೇತಿ ಹೊಂದಲು ಅನೇಕ ವಿಜ್ಞಾನಿಗಳು ಸೇರುತ್ತ್ತಿದ್ದರು. ಒಂದು ಸಲ ಇಂಥವರ ಸಂಖ್ಯೆ ಮುನ್ನೂರಕ್ಕೂ ಮೇಲ್ಪಟ್ಟು ಇತ್ತೆಂದು ತಿಳಿದಿದೆ. ಲಡ್‍ವಿಗ್ ಮತ್ತು ಹೀಡನ್‍ಹೆಯ್ನ್ ಶಿಷ್ಯರಂತೆಯೇ ಪಾವ್ಲಾವನ ಶಿಷ್ಯರು ತಮ್ಮ ಸ್ಥಳಗಳಿಗೆ ವಾಪಸಾದ ಬಳಿಕ ತಾವು ಈತನ ಕೈಕೆಳಗೆ ವ್ಯಾಸಂಗಿಸುತ್ತಿದ್ದ ವಿಷಯಗಳನ್ನು ಅವೇ ವಿಶಿಷ್ಟ ಪ್ರಯೋಗ ವಿಧಾನಗಳನ್ನೇ ಅನುಸರಿಸುತ್ತಾ ಮುಂದುವರಿಸಿದರು. ಹೀಗಾಗಿ ಯೂರೋಪ್ ಅಮೆರಿಕ ದೇಶಗಳಲ್ಲಿ ಪಾವ್ಲಾವನ ಪರಂಪರೆ ಸ್ಥಾಪಿತವಾಯಿತು.
`ವ್ಯಾಸಂಗದ ಪ್ರಾರಂಭದಿಂದಲೇ ಜ್ಞಾನಾರ್ಜನೆಯನ್ನು ಗುರಿಯಾಗಿ ಇಟ್ಟುಕೊಳ್ಳತಕ್ಕದ್ದು. ಬುಡ ಭದ್ರ ಮಾಡಿಕೊಳ್ಳದೇ ಮೇಲಿನ ಹಂತಗಳಲ್ಲಿ ಕೈ ಆಡಿಸತಕ್ಕದ್ದಲ್ಲ. ಗ್ರಂಥಾವಲೋಕನ, ವಿಷಯ ಸಂಗ್ರಹಣೆ, ತುಲನಾತ್ಮಕ ಚಿಂತನೆ ಇವನ್ನು ಕಡ್ಡಾಯವಾಗಿ ಒಳಗೊಂಡಿರಬೇಕಾದ ವಿಜ್ಞಾನದ ಪರಾಮರ್ಶೆ ಕಷ್ಟಸಾಧ್ಯ ಕಾರ್ಯ ಎಂಬುದನ್ನೂ ಇದು ವಿಜ್ಞಾನಿಯ ಶಕ್ತಿಸಾಮಥ್ರ್ಯಗಳ ಪೂರ್ಣ ಬಳಕೆಯನ್ನೂ ಕೋರುವಂಥದೆಂಬುದನ್ನು ಗ್ರಹಿಸತಕ್ಕದ್ದು. ತನಗೆ ಆಗಲೇ ಎಲ್ಲವೂ ತಿಳಿದಿದೆ ಎಂಬ ಧೋರಣೆಯನ್ನು ವರ್ಜಿಸತಕ್ಕದ್ದು. ಮಾಡಿದ ಕೆಲಸಕ್ಕಾಗಿ ಹೆಮ್ಮೆ ಪಡತಕ್ಕದ್ದಲ್ಲ ಇತ್ಯಾದಿ ಗಣನೆಗಳು ಪಾವ್ಲಾವ್ ಪರಂಪರೆಯ ವೈಶಿಷ್ಠ್ಯ. ಪ್ರಾಣಿಗಳ ಮೇಲಿನ ಪ್ರಯೋಗಗಳನ್ನು ಕೃತಕ ಸಂದರ್ಭ ಸನ್ನಿವೇಶಗಳಲ್ಲಿ ಮಾಡುವುದಲ್ಲ. ಸಾಧ್ಯವಾದ ಮಟ್ಟಿಗೂ ಪ್ರಾಣಿ ನೈಸರ್ಗಿಕ ರೀತಿಯಲ್ಲಿ ಇದ್ದಂತೆಯೇ ಮಾಡಬೇಕು. ಯಾವುದೋ ಒಂದು ಅಂಗ ಅಥವಾ ಭಾಗವನ್ನು ದೇಹದಿಂದ ಬೇರ್ಪಡಿಸಿ ವ್ಯಾಸಂಗಿಸುವುದಲ್ಲ. ಅದರ ಕ್ರಿಯೆ ಪ್ರತ್ಯೇಕವಾಗಿರುವುದಿಲ್ಲ. ದೇಹದ ಎಲ್ಲ ಭಾಗಗಳೂ ರಚನಾತ್ಮಕವಾಗಿ ಮಾತ್ರ ಅಲ್ಲದೆ ಕ್ರಿಯಾತ್ಮಕವಾಗಿಯೂ ಪರಸ್ಪರ ಸಂಬಂಧಿಸಿಯೇ ಇರುತ್ತವೆ. ದೇಹಕ್ರಿಯೆಯ ಸ್ವಭಾವವನ್ನು ವಿಶ್ಲೇಷಣ ವಿಧಾನ ಮತ್ತು ಸಂಶ್ಲೇಷಣ ವಿಧಾನ ಎರಡೂ ಬಗೆಯ ಪ್ರಯೋಗಗಳಿಂದಲೂ ಸಂಶೋಧಿಸಬೇಕು ಎಂದು ಪಾವ್ಲಾವ್ ಪ್ರಾಣಿಗಳ ಮೇಲಿನ ಪ್ರಯೋಗಗಳ ವಿಚಾರವಾಗಿ ಒತ್ತಿ ಹೇಳುತ್ತಿದ್ದ. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಪ್ರಯೋಗಗಳಿಗಾಗಿ ಪ್ರಾಣಿಗಳನ್ನು ಬಳಸುತ್ತಿದ್ದುದು ಸಾಮಾನ್ಯವಾಗಿದ್ದ ಪದ್ಧತಿ. ಅಂದರೆ ಅವನ್ನು ಕೊಂದು ಆ ಕೂಡಲೇ ಪ್ರಯೋಗಗಳನ್ನು ಕೈಗೊಳ್ಳುವುದು. ಇಲ್ಲವೇ ಅವುಗಳ ದೇಹ ಭಾಗಗಳನ್ನು ಪ್ರತ್ಯೇಕಿಸಿ ಆ ಭಾಗಗಳ ಮೇಲೆ ಪ್ರಯೋಗ ನಡೆಸುವುದು ಅಥವಾ ಪ್ರಾಣಿಗಳಿಗೆ ಅತ್ಯಂತ ಗಾಢವಾದ ಅರಿವಳಿಕೆಯನ್ನು ಉಂಟುಮಾಡಿ ಆ ಸ್ಥಿತಿಯಲ್ಲಿ ಪ್ರಯೋಗಗಳನ್ನು ಮಾಡುವುದು ಮುಂತಾದ ವಿಧಾನಗಳಿಂದ ದೇಹಕ್ರಿಯೆಯ ವಿಷಯವಾಗಿ ಅನೇಕ ಸಂಗತಿಗಳು ವೇದ್ಯವಾದದ್ದು ನಿಜವಾದರೂ ಹೀಗೆ ಮಾಡಿದ ಪ್ರಯೋಗಗಳಲ್ಲಿ ಪ್ರಾಣಿಯ ನೈಸರ್ಗಿಕ ಜೀವನದಲ್ಲಿ ಕಾಣಬರುವ ಕ್ರಿಯೆಯೇ ಖಚಿತವಾಗಿ ಗೊತ್ತಾಗುವುದೆಂಬುದು ಸ್ವಾಭಾವಿಕವಾಗಿಯೇ ಸಂದೇಹಾಸ್ಪದವಾಗಿತ್ತು. ಎಷ್ಟೇ ಆದರೂ ಪ್ರಯೋಗ ಸಂದರ್ಭ ಕೃತಕ. ಈ ವಿಶೇಷ ಅಂಶವೇ ನೈಸರ್ಗಿಕ ಕ್ರಿಯೆಗಳ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದಲೇ ಪ್ರಯೋಗ ವಿಧಾನವನ್ನು ಬದಲಿಸಿ ಪ್ರಯೋಗ ಕಾಲದಲ್ಲಿ ಪ್ರಾಣಿ ಆದಷ್ಟು ನೈಸರ್ಗಿಕ ಸ್ಥಿತಿಯಲ್ಲಿಯೇ ಇರುವಂತೆ ನೋಡಿಕೊಂಡು ಪ್ರಯೋಗಗಳನ್ನು ಮಾಡಬೇಕು ಎಂದು ಪಾವ್ಲಾವ್ ಯೋಚಿಸಿ ಕೃತಕೃತ್ಯನಾದ.

ಇನ್‍ಸ್ಟಿಟ್ಯೂಟ್ ಆಫ್ ಎಕ್ಸ್‍ಪೆರಿಮೆಂಟಲ್ ಮೆಡಿಸಿನ್ ಮತ್ತು ಮಿಲಿಟರಿ ಮೆಡಿಕಲ್ ಅಕಾಡೆಮಿಯಲ್ಲಿ ಪಾವ್ಲಾವ್ 1925ರ ತನಕ ಕಾರ್ಯನಿರತನಾಗಿದ್ದು ಅನಂತರ ಅಲ್ಲಿಯ ಹುದ್ದೆಗಳಿಗೆ ರಾಜೀನಾಮೆ ಕೊಟ್ಟ. ಮುಂದೆ ಅವನು ಸೋವಿಯತ್ ಅಕಾಡೆಮಿ ಆಫ್ ಸೈನ್ಸಸ್ಸಿನ ದೇಹಕ್ರಿಯಾಭಾಗದಲ್ಲಿ (ಈಗ ಇದನ್ನು ಪಾವ್ಲಾವನ ಗೌರವಾರ್ಥ ಅವನ ಹೆಸರಿನಿಂದಲೇ ಸಂಬೋಧಿಸುವುದಿದೆ) ಕಾರ್ಯನಿರತನಾದ. ಲೆನಿನ್‍ಗ್ರಾಡಿನ ಹತ್ತಿರ ಕೋಲ್ಟುಶಿ (ಈಗ ಇದನ್ನು ಪಾವ್ಲೋವೊ ಎಂದು ಕರೆಯುತ್ತಾರೆ) ಎಂಬಲ್ಲಿ ಒಂದು ಜೀವವಿಜ್ಞಾನಸಂಸ್ಥೆಯನ್ನು ಸ್ಥಾಪಿಸಿ ಅಲ್ಲೂ ಪಾವ್ಲಾವನಿಗೆ ಪ್ರಾಯೋಗಿಕ ವ್ಯಾಸಂಗಗಳನ್ನು ನಡೆಸಲು ಅನುಕೂಲ ಮಾಡಿಕೊಡಲಾಯಿತು. ಆತ ಬದುಕಿದ್ದ ಕೊನೆಗಳಿಗೆಯ ತನಕವೂ ಅಲ್ಲಿ ಪ್ರಯೋಗ ನಿರತನಾಗಿದ್ದ. 1936 ಫೆಬ್ರವರಿ 27 ಲೆನಿನ್‍ಗ್ರಾಡಿನಲ್ಲಿ ನ್ಯೂಮೋನಿಯಾದಿಂದ ಮೃತನಾದ.

ಪಾವ್ಲಾವನ ವ್ಯಾಸಂಗಗಳು ಮುಖ್ಯವಾಗಿ ಮೂರು ವಿಷಯಗಳಿಗೆ ಸಂಬಂಧಪಟ್ಟವು. ರಕ್ತ ಪರಿಚಲನೆ (1874-88), ಜೀರ್ಣಕ್ರಿಯೆ (1879-97) ಮತ್ತು ನರಮಂಡಲದ ಕ್ರಿಯೆ (1902-36). ಹೃದಯ ಮತ್ತು ರಕ್ತನಾಳಗಳು ನರ ನಿಯಂತ್ರಣಕ್ಕೆ ಅಧೀನವಾಗಿರುವುದರಿಂದ ರಕ್ತದ ಒತ್ತಡ ಹಾಗೂ ಗುಂಡಿಗೆ ಮಿಡಿತದ ದರ ಮತ್ತು ಬಲ ಈ ಅಧೀನತೆಯಿಂದ ನಿಯಂತ್ರಿತವಾಗುತ್ತವೆ ಎಂದು ಪಾವ್ಲಾವ್ ಅನೇಕ ಪ್ರಯೋಗಗಳಿಂದ ವಿಶದೀಕರಿಸಿದ. ರಕ್ತದ ಒತ್ತಡವನ್ನು ಅರಿಯಲು ಪ್ರಾಣಿಗಳ ಅಪಧಮನಿಯ ಒಳಗೆ ನಳಿಕೆಯನ್ನು ತೂರಿ ಸಂಮರ್ದಮಾಪಕಕ್ಕೆ ಸಂಪರ್ಕಿಸಬೇಕಾಗಿತ್ತು. ಹೀಗೆ ದೂಡುವಾಗ ಪ್ರಾಣಿಗಳು ಪ್ರಜ್ಞಾಸ್ಥಿತಿಯಲ್ಲಿಯೇ ಇರಬೇಕಾಗಿದ್ದುದರ ಜೊತೆಗೆ ಅವಕ್ಕೆ ನೋವಾಗದಂತೆಯೂ ಇರಬೇಕಾಗಿತ್ತು. ಏಕೆಂದರೆ ರಕ್ತನಾಳಗಳ ಮತ್ತು ಹೃದಯದ ಮೇಲೆ ನೋವು ನರಗಳ ಮೂಲಕ ಪರಿಣಮಿಸುವ ವಿಷಯ ಆಗಲೇ ತಿಳಿದಿತ್ತು. ನಾಯಿಗಳಿಗೆ ಹೀಗೆ ನೋವಾಗದಂತೆ ನಳಿಕೆಯನ್ನು ತೂರುವುದರಲ್ಲಿ ಪಾವ್ಲಾವ್ ಸಿದ್ಧಹಸ್ತನಾಗಿದ್ದನೆಂದು ಮೇಲೆ ಹೇಳಿದೆ. ಹೀಡನ್‍ಹೆಯ್ನನ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದಾಗ ಪಾವ್ಲಾವನಿಗೆ ಜೀರ್ಣಕ್ರಿಯೆಯ ಬಗ್ಗೆ ಆಸಕ್ತಿ ಮೂಡಿತು. ಅದರ ಕ್ರಿಯೆ ಮತ್ತು ಜಠರ ರಸದ ಸ್ರಾವವನ್ನು ವ್ಯಾಸಂಗಿಸುವುದಕ್ಕಾಗಿ ಹೀಡನ್‍ಹೆಯ್ನ್ ಜಠರದ ಒಂದು ಭಾಗವನ್ನು ಪ್ರತ್ಯೇಕಿಸಿ ಆಹಾರ ಪದಾರ್ಥಗಳು ಅದಕ್ಕೆ ಪ್ರವೇಶಿಸದಂತೆ ಮಾಡಿ ಆ ಭಾಗದಲ್ಲಿ ಸ್ರವಿಸಿದ ಜಠರರಸವನ್ನು ಪರೀಕ್ಷಿಸುವ ವಿಧಾನವನ್ನು ಸಿದ್ಧಗೊಳಿಸಿದ್ದ. ಆದರೆ ಜಠರ ಭಾಗವನ್ನು ಪ್ರತ್ಯೇಕಿಸುವಾಗ ಅದಕ್ಕೆ ಪೂರೈಕೆ ಆಗುವ ನರಕ್ಕೆ ಜಖಮ್ಮಾಗುತ್ತಿದ್ದುದನ್ನು ಪಾವ್ಲಾವ್ ಗಮನಿಸಿ ಬೇರೆ ರೀತಿಯಲ್ಲಿ ಅದನ್ನು ಪ್ರತ್ಯೇಕಿಸುವ ವಿಧಾನವನ್ನು ಕಂಡುಹಿಡಿದ. ಇಂಥ ಜಠರ ಭಾಗಕ್ಕೆ ಪಾವ್ಲಾವ್ ಪೌಚ್ ಎಂದೇ ಹೆಸರು. ಜಠರ ರಸದ ಸ್ರಾವ ಖಂಡಿತವಾಗಿಯೂ ನರನಿಯಂತ್ರಣಕ್ಕೆ ಒಳಪಟ್ಟಿದೆ ಎಂದು ಪಾವ್ಲಾವ್ ಪೌಚಿನ ಮೇಲಿನ ಪ್ರಯೋಗಗಳಿಂದ ತಿಳಿದುಬಂತು. ಜಠರದ ಮುಖ್ಯಭಾಗವನ್ನು ಆಹಾರ ಪ್ರವೇಶಿಸಿದಾಗ ಜಠರ ರಸ ಉತ್ಪತ್ತಿ ಆಗುವ ಕಾಲದಲ್ಲಿ ಪಾವ್ಲಾವ್ ಪೌಚಿನಲ್ಲೂ ಉತ್ಪತ್ತಿ ಆಗುತ್ತದೆ ಎಂದೂ ಜಠರಕ್ಕೆ ಪೂರೈಕೆ ಆಗುವ ನರಗಳನ್ನು ಕತ್ತರಿಸಿ ಹಾಕಿದರೆ ಪೌಚಿನಲ್ಲಿ ಜಠರ ರಸದ ಸ್ರಾವ ಆಗುವುದಿಲ್ಲವೆಂದು ವಿಶದವಾಯಿತು. ನರ ನಿಯಂತ್ರಣಕ್ಕೆ ಕಾರಣ ಆಹಾರ ಜಠರವನ್ನು ಪ್ರವೇಶಿಸುವುದು ಮಾತ್ರವಲ್ಲ; ಅದು ಜಠರದೊಳಗೆ ಪ್ರವೇಶಿಸದೇ ಇರುವಾಗಲೂ ಜಠರ ರಸ ಸ್ರವಿಸುವ ಸಂದರ್ಭ ಉಂಟು. ಇಂಥ ಸ್ರಾವವನ್ನು ಜಠರ ನರಗಳ ಛಿದ್ರತೆಯಿಂದ ತಪ್ಪಿಸಬಹುದು ಎಂದು ಪಾವ್ಲಾವ್ ತೋರಿಸಿದ. 1878 ರಲ್ಲಿ ರೈಕೆಟ್ ಎಂಬ ವೈದ್ಯ ತನ್ನ ರೋಗಿಗಳ ಪೈಕಿ ಒಬ್ಬನಲ್ಲಿ ಕಂಡುಬಂದಿದ್ದ ವಿಶೇಷ ಪರಿಸ್ಥಿತಿಯೊಂದನ್ನು ಪ್ರಕಟಿಸಿದ್ದ. ಈ ರೋಗಿಯ ಅನ್ನನಾಳದಲ್ಲಿ ರೋಗಪ್ರಕ್ರಿಯೆ ಉಂಟಾಗಿ ನಾಳ ಹೆಚ್ಚು ಕಡಿಮೆ ಮುಚ್ಚಿ ಹೋಗಿದಂತಾಗಿ ರೋಗಿ ಪದಾರ್ಥಗಳನ್ನು ನುಂಗಲು ಸಾಧ್ಯವಿಲ್ಲವಾಗಿತ್ತು. ಅವನಿಗೆ ಆಹಾರ ಕೊಡಲು ಅವನ ಜಠರವನ್ನು ಕೊಯ್ದು ಹೊರಕ್ಕೆ ದ್ವಾರವಿರುವಂತೆ ಮಾಡಿದ್ದರು. ಇದಕ್ಕೆ ಜಠರದ ಫಿಶ್ಚುಲ ಎಂದು ಹೆಸರು. ಆಹಾರವನ್ನು ನೋಡಿದ ಮಾತ್ರದಿಂದಲೇ ಈ ರೋಗಿಯ ಜಠರದಲ್ಲಿ ಸ್ರಾವವಾಗುವುದು ಫಿಶ್ಚುಲದ ಮೂಲಕ ಪತ್ತೆಯಾಯಿತು. ಈ ವಿಷಯವನ್ನು ರೈಕೆಟ್ ಪ್ರಕಟಿಸಿದ್ದ. ಅದರಿಂದ ಪಾವ್ಲಾವನಿಗೆ ಒಂದು ಪ್ರಯೋಗ ವಿಧಾನ ಹೊಳೆಯಿತು. ನಾಯಿಯ ಅನ್ನನಾಳವನ್ನು ಕತ್ತರಿಸಿ ತುದಿಗಳೆರಡನ್ನೂ ಹೊರಕ್ಕೆ ತೆರೆದುಕೊಳ್ಳುವಂತೆ ಚರ್ಮಕ್ಕೆ ಸೇರಿಸಿ ಹೊಲಿಯುವುದು. ಹೀಗೆ ಮಾಡಿದಾಗ ಬಾಯಿಯಿಂದ ಸೇವಿಸಿದ ಆಹಾರ ಹೊರಚಾಚಿದ್ದ ಅನ್ನನಾಳದ ದ್ವಾರದಿಂದ ಹೊರಕ್ಕೆ ಬಂದುಬಿಡುವಂತಾಗುತ್ತದೆ. ಅದು ಜಠರವನ್ನು ಪ್ರವೇಶಿಸುವುದಿಲ್ಲ. ನಾಯಿಗೆ ಆಹಾರವನ್ನು ಕೊಡಬೇಕಾದ ಸಂದರ್ಭದಲ್ಲಿ ಅದನ್ನು ಅನ್ನನಾಳದ ಇನ್ನೊಂದು ದ್ವಾರದಿಂದ ಊಡಿಸಬಹುದು. ಇಂಥ ಪ್ರಯೋಗಕ್ಕೆ ನಕಲಿ ಉಣಿಸಾಟ (ಶ್ಯಾಮ್ ಫೀಡಿಂಗ್) ಎಂದು ಹೆಸರು. ಇದೇ ನಾಯಿಯಲ್ಲಿ ಪಾವ್ಲಾವ್ ಪೌಚನ್ನು ಏರ್ಪಡಿಸಿ ಪ್ರಯೋಗಗಳನ್ನು ಮಾಡಿದಾಗ ಜಠರದಲ್ಲಿ ಅನ್ನವಿಲ್ಲದಿದ್ದಾಗಲೂ ನರ ನಿಯಂತ್ರಣದಿಂದ ಜಠರ ರಸ ಸ್ರವಿಸುತ್ತದೆ ಎಂಬುದು ಖಚಿತವಾಯಿತು. 

ನಿರಿಚ್ಛಾಕ್ರಿಯೆಯಾದ ನರ ನಿಯಂತ್ರಣಕ್ಕೆ ಪ್ರತಿವರ್ತ ಎಂದು ಹೆಸರು. ಬಾಯಿಯಲ್ಲಿ ಇಲ್ಲವೇ ಜಠರದಲ್ಲಿ ಆಹಾರ ಇಟ್ಟಾಗ ಜಠರದಲ್ಲಿ ಸ್ರಾವ ಆಗುವುದು ಈ ಪ್ರತಿವರ್ತದಿಂದ. ಇದು ನೈಸರ್ಗಿಕ ಕ್ರಿಯೆ. ಅಜನ್ಮವಾಗಿ ಎಲ್ಲರಲ್ಲೂ ಕಂಡುಬರುವಂಥದ್ದು. ಆದರೆ ಆಹಾರವನ್ನು ನೋಡಿದ ಮಾತ್ರದಿಂದ, ಅದರ ವಾಸನೆಯನ್ನು ಗ್ರಹಿಸಿದ ಮಾತ್ರದಿಂದ ಇಲ್ಲವೇ ಆಹಾರ ಸೇವನೆಯ ಕಾಲದಲ್ಲಿ ವ್ಯಕ್ತವಾಗುವ ಶಬ್ದಗಳನ್ನು ಕೇಳಿದ ಮಾತ್ರದಿಂದ ಜಠರ ಸ್ರಾವವಾಗುವುದು. ಹುಟ್ಟಿದಂದಿನಿಂದ ಕಂಡುಬರುವುದಿಲ್ಲ. ತತ್ಕಾಲದಲ್ಲಿಯ ಆಹಾರ ಸೇವನೆಗೇ ಇವೆಲ್ಲ ಸಂಬಂಧಪಟ್ಟಿರತಕ್ಕವು ಎಂಬ ವಿಷಯವನ್ನು ಪ್ರಾಣಿ ದೀರ್ಘಾವಧಿ ಅಭ್ಯಾಸದಿಂದ ಕಲಿತ ಮೇಲೆ ಮಾತ್ರ ಈ ಸಂದರ್ಭಗಳಲ್ಲಿ ಜಠರರಸ ಸ್ರಾವವಾಗಿರುತ್ತದೆ. ಈ ವಿಷಯಗಳನ್ನು ಪಾವ್ಲಾವ್ ತನ್ನ ಪ್ರಯೋಗಗಳಿಂದ ತೋರಿಸಿದ ಮತ್ತು ಕಲಿಕೆಯಿಂದ ಮಾತ್ರ ಸಿದ್ಧಿಸುವ ಈ ನರನಿಯಂತ್ರಣಕ್ಕೆ ಕಂಡೀಷನ್ಡ್ ರಿಫ್ಲೆಕ್ಸ್ (ಸೋಪಾಧಿಕ ಪ್ರತಿವರ್ತ) ಎಂದೂ ನೈಸರ್ಗಿಕವಾಗಿ ಆಜನ್ಮವಾಗಿ ಕಂಡು ಬರುವ ನರನಿಯಂತ್ರಣಕ್ಕೆ ನಿರುಪಾಧಿಕ ರಿಫ್ಲೆಕ್ಸ್ (ಅನಿರ್ಬಂಧಿತ ಪ್ರತಿವರ್ತ) ಎಂದೂ ಹೆಸರಿಟ್ಟ.

ಮೇದೋಜೀರಕಾಂಗದ ರಸವನ್ನು ಸಂಗ್ರಹಿಸುವುದಕ್ಕಾಗಿ ಅದರ ನಾಳ ಹೊರಕ್ಕೆ ತೆರೆದು ಕೊಳ್ಳುವಂಥ ಶಸ್ತ್ರಕ್ರಿಯೆಯನ್ನು ಪಾವ್ಲಾವ್ ವಿವರಿಸಿದ್ದನೆಂದು ಮೇಲೆ ಹೇಳಿದೆ. ಅದೇ ರೀತಿ ನಾಯಿಯಲ್ಲಿ ಲಾಲಾರಸವನ್ನು (ಜೊಲ್ಲು) ಸಂಗ್ರಹಿಸಲು ಲಾಲಾಗ್ರಂಥಿಯ ನಾಳ ಹೊರಕ್ಕೆ ತೆರೆದುಕೊಳ್ಳುವಂಥ ಶಸ್ತ್ರಕ್ರಿಯೆಯನ್ನೂ ಪಾವ್ಲಾವ್ ಸಾಧಿಸಿದ. ನಾಯಿಗೆ ಕ್ಲುಪ್ತವಾಗಿ ಆಹಾರ ಕೊಡುವ ವೇಳೆಗೆ ಐದು ನಿಮಿಷ ಮುಂದೆ ಒಂದೆರಡು ಸಲ ಗಂಟೆ ಬಾರಿಸುವಂತೆ ಏರ್ಪಡಿಸಿ ನಾಯಿ ಈ ಗಂಟೆಯ ಶಬ್ದವನ್ನು ಆಹಾರ ಸೇವನೆಯೊಡನೆ ಸಂಬಂಧ ಕಲ್ಪಿಸುವಂತೆ ಕಲಿಸಿದ. ಕೆಲಕಾಲಾನಂತರ ಹೀಗೆ ಚೆನ್ನಾಗಿ ರೂಢಿಯಾದ ಬಳಿಕ ಗಂಟೆಯ ಶಬ್ದವನ್ನು ಮಾಡಿದ. ಆದರೆ ಆಹಾರವನ್ನು ಕೊಡದೆ ಹೋದ. ಆದರೂ ನಾಯಿಯ ಲಾಲಾರಸ ಸ್ರಾವ ಮಾಮೂಲಿನಂತೆಯೇ ಆಯಿತು. ಅಂದರೆ ಲಾಲಾರಸ ಸ್ರಾವವೂ ಜಠರ ರಸ ಸ್ರಾವದಂತೆಯೇ ನರನಿಯಂತ್ರಣಕ್ಕೆ ಒಳಪಟ್ಟಿದ್ದು, ಜಠರದಲ್ಲಿಯಂತೆಯೇ ಲಾಲಾಗ್ರಂಥಿಯಲ್ಲೂ ಈ ನರನಿಯಂತ್ರಣ ಆಜನ್ಮ ಮತ್ತು ಕಲಿಕೆ ಎರಡು ವಿಧಾನಗಳಿಂದಲೂ ಸಿದ್ಧಿಸಿರುತ್ತದೆ ಎಂಬುದು ಪಾವ್ಲಾವನ ಪ್ರಯೋಗಗಳಿಂದ ತಿಳಿದಂತಾಯಿತು. ಸೋಪಾಧಿಕ ಪ್ರತಿವರ್ತಗಳು ಯಾವ ಬಗೆಯವು ಅವುಗಳ ಕಾರ್ಯವಿಧಾನವೇನು, ಅರ್ಥವೇನು ಎನ್ನುವುದನ್ನೆಲ್ಲ ಪಾವ್ಲಾವ್ ಕಲಿಕೆಯಿಂದಾಗುವ ಲಾಲಾರಸಸ್ರಾವವಿಧಾನದಿಂದಲೇ ಮುಂದೆ ಬಹುವಾಗಿ ವ್ಯಾಸಂಗಿಸಿ ವಿವರಿಸಿದ. ಸೋಪಾಧಿಕ ಪ್ರತಿವರ್ತಗಳ ವ್ಯಾಸಂಗದಿಂದ ನರಮಂಡಲದ ಕ್ರಿಯೆಯ ಬಗ್ಗೆ ಅನೇಕ ವಿಷಯಗಳು ವಿಶದವಾದದ್ದಷ್ಟೇ ಅಲ್ಲ ನಿದ್ರೆ, ಮನೋರೋಗ ಹಾಗೂ ದೈಹಿಕ ರೋಗಗಳನೇಕವು ಸೋಪಾಧಿಕ ಪ್ರತಿವರ್ತಕ್ಕೆ ಸಂಬಂಧಿಸಿದವೆಂದು ತಿಳಿಯಬಂತು ಕೂಡಾ. ಇದರ ವ್ಯಾಸಂಗದಿಂದ ಮನೋವಿಜ್ಞಾನವು ಬಹಳವಾಗಿ ಮುನ್ನಡೆಯುವುದಕ್ಕೆ ಅವಕಾಶವಾಯಿತು.

ಪಾವ್ಲಾವನಿಗೂ ರಾಜಕೀಯಕ್ಕೂ ದೂರ. ರಷ್ಯದ ಮಹಾಕ್ರಾಂತಿಗೆ ಸುಮಾರು ಮೂವತ್ತು ವರ್ಷಗಳಿಗೂ ಹಿಂದೆಯೇ ಸುಪ್ರಸಿದ್ಧವಾಗಿದ್ದ ಪಾವ್ಲಾವ್ ಸೋವಿಯತ್ ಒಕ್ಕೂಟದ ಸರ್ಕಾರ ಸ್ಥಾಪಿತವಾದ ಮೇಲೂ ಸುಮಾರು ಹದಿನೈದು ವರ್ಷ ಉನ್ನತ ಮಟ್ಟದ ಪ್ರಾಯೋಗಿಕ ವ್ಯಾಸಂಗಗಳನ್ನು ಮಾಡುತ್ತಾ ಮುಂದುವರಿದ. ಇವನ ವೈಯಕ್ತಿಕ ಔನ್ನತ್ಯವನ್ನು ಮನಗಂಡ ಸೋವಿಯತ್ ಸರ್ಕಾರ ಇವನನ್ನು ರಾಜಕೀಯ ವ್ಯಾಪ್ತಿಗೆ ಒಳಪಡಿಸದೆ ಇವನಿಗೆ ತಕ್ಕ ಅನುಕೂಲತೆಗಳನ್ನು ಒದಗಿಸುತ್ತಲೇ ಮುಂದುವರಿದದ್ದು ವೈಜ್ಞಾನಿಕ ಕ್ಷೇತ್ರಕ್ಕೆ ದೊಡ್ಡ ಲಾಭವಾಯಿತು. ಪ್ರಮುಖವಾಗಿ ಪಾವ್ಲಾವ್ ತನ್ನ ವ್ಯಾಸಂಗಗಳು ಶಿಷ್ಯರ ಶಿಕ್ಷಣ ಮುಂತಾದವಕ್ಕೆ ಗಮನ ಕೊಡುತ್ತಿದ್ದರೂ ನಿರ್ವಾಹವಿಲ್ಲದೆ ಕೆಲವು ವೇಳೆ ರಾಜಕೀಯ ವ್ಯಕ್ತಿಗಳೊಡನೆ ಸಂಘರ್ಷಿಸಿದ್ದುಂಟು. 1922ರ ಕಾಲದಲ್ಲಿ ತರುಣ ಸೋವಿಯತ್ ಸರ್ಕಾರದ ಆಡಳಿತ ಬಲು ಅಸಮರ್ಪಕವಾಗಿದ್ದು ಆಹಾರಾಭಾವ ಉಂಟಾಗಿತ್ತು. ಆಗ ಪಾವ್ಲಾವ್ ಲೆನಿನ್ನನಿಗೆ ತಾನು ವ್ಯಾಸಂಗಗಳನ್ನು ಆಹಾರಾಭಾವದ ದೆಸೆಯಿಂದ ಮುಂದುವರಿಸುವುದಕ್ಕಾಗುವುದಿಲ್ಲವೆಂದೂ ಅದಕ್ಕಾಗಿ ಬೇರೆ ದೇಶಕ್ಕೆ ಹೋಗಿ ನೆಲೆಸಲಿಚ್ಛಿಸುವೆನೆಂದೂ ಹೇಳಿದ. ಅದಕ್ಕೆ ಲೆನಿನ್ ಒಪ್ಪದೆ ಅವನನ್ನು ಪ್ರಮುಖ ಕಮ್ಯೂನಿಸ್ಟಾಗಿ ಗಣಿಸಿ ಅವನಿಗೆ ಆಹಾರಪಡಿತರವನ್ನು ತೃಪ್ತಿಕರವಾಗಿ ಪೂರೈಸುವಂತೆ ಅಪ್ಪಣೆ ಮಾಡಿದ. ಆದರೆ ಪಾವ್ಲಾವ್ ತನ್ನ ಸಿಬ್ಬಂದಿಗೂ ತನ್ನಂತೆಯೇ ಪಡಿತರವನ್ನು ತೃಪ್ತಿಕರವಾಗಿ ಪೂರೈಸಬೇಕೆಂದೂ ಇಲ್ಲದಿದ್ದರೆ ತನಗೂ ಬೇಡವೆಂದೂ ಖಂಡಿತವಾಗಿ ಹೇಳಿಬಿಟ್ಟ. ಇನ್ನೊಂದು ಸಲ ಲೆನಿನ್‍ಗ್ರಾಡಿನ ಮಿಲಿಟರಿ ಅಕಾಡೆಮಿಯಿಂದ ಮಠಾಧಿಕಾರಿಗಳೆಲ್ಲರ ಮಕ್ಕಳೂ ಉತ್ಪಾಟನೆ ಆದಾಗ ಅವರೆಲ್ಲರನ್ನೂ ಪುನಃ ಹಿಂದಕ್ಕೆ ತೆಗೆದುಕೊಳ್ಳಬೇಕೆಂದೂ ಇಲ್ಲದಿದ್ದರೆ ಮಠಾಧಿಕಾರಿಯೊಬ್ಬನ ಮಗನಾದ ತಾನೂ ಕೆಲಸವನ್ನು ತ್ಯಜಿಸುವೆನೆಂದೂ ಹಠಹಿಡಿದ. 1927 ರಲ್ಲಿ ರಷ್ಯದ ಅಕಾಡೆಮಿ ಆಫ್ ಸೈನ್ಸಸ್ಸಿಗೆ ಕಮ್ಯೂನಿಸ್ಟ್ ವಾಲಿಕೆಯ ಪ್ರಾಧ್ಯಾಪಕರುಗಳನ್ನು ಮಾತ್ರ ನೇಮಿಸಿದಾಗ ಏಕಾಕಿಯಾಗಿಯೇ ಈ ಕ್ರಮವನ್ನು ಉಗ್ರವಾಗಿ ಪ್ರತಿಭಟಿಸಿ ಇದರಿಂದ ನೀತಿಭ್ರಷ್ಟತೆ ಆಗುವುದಲ್ಲದೆ ರಷ್ಯದ ವಿಜ್ಞಾನದ ಮಟ್ಟದ ಅವನತಿಗೆ ದಾರಿಮಾಡಿಕೊಟ್ಟಂತಾಗುವುದೆಂದೂ ಎಚ್ಚರಿಸಿದ. ಆಗಿನ ಕಮ್ಯೂನಿಸ್ಟ್ ವಿದ್ಯಾಮಂತ್ರಿ ಬುಖಾರಿನ್ ಪಾವ್ಲಾವನ ಪ್ರಯೋಗಾಲಯಕ್ಕೆ ಭೇಟಿಕೊಡಲು ಕೋರಿದ್ದ ಅನುಮತಿಯನ್ನು ವಿಜ್ಞಾನಾಲಯಗಳಲ್ಲಿ ಕಮ್ಯೂನಿಸ್ಟ್ ಭಾವನೆಯನ್ನು ಹತ್ತಿಕ್ಕಬೇಕು ಎನ್ನುವ ಮನಸ್ಸಿನಿಂದ ನಿರಾಕರಿಸಿದ. ಇಷ್ಟೆಲ್ಲ ಕಹಿ ವಾತಾವರಣ ಆಗಾಗ ಏರ್ಪಡುತ್ತಿದ್ದರೂ ವೈಜ್ಞಾನಿಕವಾಗಿ ವಿಜ್ಞಾನ ನಿರ್ದೇಶಕನಾಗಿ ಪ್ರಯೋಗಾಲಯ ಹಾಗೂ ವೈಜ್ಞಾನಿಕ ಸಂಸ್ಥೆಗಳ ಮೇಲ್ವಿಚಾರಕನಾಗಿ ಪಾವ್ಲಾವ್ ಪಡೆದಿದ್ದ ಉನ್ನತಮಟ್ಟವನ್ನು ಸೋವಿಯತ್ ಸರ್ಕಾರದ ಅತ್ಯಂತ ಪ್ರಮುಖ ವ್ಯಕ್ತಿಗಳು ಕಡೆಗಣಿಸುವಂತಿರಲಿಲ್ಲ ಮತ್ತು ದೇಶದ ಗೌರವ ಹಿರಿಮೆಗಳನ್ನು ಕಾಪಾಡಿಕೊಳ್ಳುವುದಕ್ಕಾಗಿ ಪಾವ್ಲಾವ್ ತಮ್ಮೊಡನೆಯೇ ಇರುವುದು ಅಗತ್ಯ ಎನ್ನುವುದನ್ನು ಮರೆಯುವಂತಿರಲಿಲ್ಲ. ಹೀಗಾಗಿ ಸೋವಿಯತ್ ಸರ್ಕಾರ ಪಾವ್ಲಾವನನ್ನು ನಿಕೃಷ್ಟವಾಗಿ ಕಾಣದೆ ಅನೇಕ ಸಲ ಗೌರವಿಸಿದ್ದು ನಿಜ. ಅವನಿಗೆ ಮತ್ತು ಅವನ ಸಂಸ್ಥೆಗಳಿಗೆ ಅವಶ್ಯಕ ಅನುಕೂಲತೆಗಳನ್ನು ಮಾಡಿಕೊಡಲು ಸದಾ ಸಿದ್ಧವಾಗಿತ್ತು. ಇದರಿಂದ ಬಹುಶಃ ಪಾವ್ಲಾನನೂ ಸ್ವಲ್ಪ ಸಮಾಧಾನಪಟ್ಟುಕೊಂಡು ಕಮ್ಯೂನಿಸ್ಟ್ ಸಿದ್ಧಾಂತಕ್ಕೆ ಒಗ್ಗಿಕೊಳ್ಳುವಂತಾಯಿತು.
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ